Kannada Translation - Hamza Buturಅಲಿಫ್ ಲಾಮ್ ಮೀಮ್ ರಾ. ಇವು ಗ್ರಂಥದ ವಚನಗಳು. ನಿಮಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಏನು ಅವತೀರ್ಣವಾಗಿದೆಯೋ ಅದು ಸತ್ಯವಾಗಿದೆ. ಆದರೆ ಜನರಲ್ಲಿ ಹೆಚ್ಚಿನವರು ವಿಶ್ವಾಸವಿಡುವುದಿಲ್ಲ.
Kannada Translation - Hamza Buturನೀವು ನೋಡುತ್ತಿರುವಂತೆ ಯಾವುದೇ ಸ್ಥಂಭಗಳ ಆಧಾರವಿಲ್ಲದೆ ಆಕಾಶವನ್ನು ಎತ್ತಿ ನಿಲ್ಲಿಸಿದವನೇ ಅಲ್ಲಾಹು. ನಂತರ ಅವನು ಸಿಂಹಾಸನದಲ್ಲಿ ಆರೂಢನಾದನು. ಅವನು ಸೂರ್ಯ-ಚಂದ್ರರನ್ನು ಅಧೀನಗೊಳಿಸಿದ್ದಾನೆ. ಎಲ್ಲವೂ ಒಂದು ನಿಗದಿತ ಅವಧಿಯ ತನಕ ಚಲಿಸುತ್ತಿರುವುವು. ಅವನು ಎಲ್ಲಾ ವಿಷಯಗಳನ್ನು ನಿಯಂತ್ರಿಸುತ್ತಾನೆ. ನೀವು ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಭೇಟಿಯಾಗುವ ವಿಷಯದಲ್ಲಿ ದೃಢವಿಶ್ವಾಸಿಗಳಾಗುವುದಕ್ಕಾಗಿ ಅವನು ತನ್ನ ದೃಷ್ಟಾಂತಗಳನ್ನು ಸ್ಪಷ್ಟವಾಗಿ ವಿವರಿಸಿಕೊಡುತ್ತಿದ್ದಾನೆ.
Kannada Translation - Hamza Buturಭೂಮಿಯನ್ನು ವಿಸ್ತರಿಸಿದವನು ಅವನೇ. ಅವನು ಅದರಲ್ಲಿ ಪರ್ವತಗಳನ್ನು ಮತ್ತು ನದಿಗಳನ್ನು ಸೃಷ್ಟಿಸಿದನು. ಎಲ್ಲಾ ವಿಧ ಹಣ್ಣುಗಳಲ್ಲೂ ಅವನು ಎರಡೆರಡು ಜೋಡಿಗಳನ್ನು ಸೃಷ್ಟಿಸಿದನು.[1] ಅವನು ರಾತ್ರಿಯನ್ನು ಹಗಲಿನ ಮೇಲೆ ಮುಚ್ಚುತ್ತಾನೆ. ಆಲೋಚಿಸುವ ಜನರಿಗೆ ಅದರಲ್ಲಿ ಖಂಡಿತ ದೃಷ್ಟಾಂತಗಳಿವೆ.
Kannada Translation - Hamza Buturಭೂಮಿಯಲ್ಲಿ ಒಂದಕ್ಕೊಂದು ತಾಗಿಕೊಂಡಿರುವ ವಿಭಿನ್ನ ಜಮೀನುಗಳು, ದ್ರಾಕ್ಷಿ ತೋಟಗಳು, ಹೊಲಗಳು, ರೆಂಭೆಗಳಿರುವ ಮತ್ತು ರೆಂಭೆಗಳಿಲ್ಲದ ಖರ್ಜೂರ ಮರಗಳು ಇವೆ. ಇವೆಲ್ಲದ್ದಕ್ಕೂ ಒಂದೇ ನೀರನ್ನು ಉಣಿಸಲಾಗುತ್ತದೆ. ಆದರೂ ಅವುಗಳ ಹಣ್ಣುಗಳಲ್ಲಿ ಒಂದಕ್ಕೆ ಇನ್ನೊಂದಕ್ಕಿಂತ ಶ್ರೇಷ್ಠತೆಯನ್ನು ನೀಡುತ್ತೇವೆ. ಅರ್ಥಮಾಡಿಕೊಳ್ಳುವ ಜನರಿಗೆ ಅದರಲ್ಲಿ ಖಂಡಿತ ದೃಷ್ಟಾಂತಗಳಿವೆ.
Kannada Translation - Hamza Buturನಿಮಗೆ ಅಚ್ಚರಿಯಾಗುವುದಾದರೆ, ವಾಸ್ತವದಲ್ಲಿ ಅವರು ಹೇಳುವ “ನಾವು ಮಣ್ಣಾಗಿ ಬಿಟ್ಟ ಬಳಿಕ ನಮ್ಮನ್ನು ಪುನಃ ಸೃಷ್ಟಿಸಲಾಗುವುದೇ?” ಎಂಬ ಮಾತು ಹೆಚ್ಚು ಅಚ್ಚರಿದಾಯಕವಾಗಿದೆ. ಅವರೇ ಅವರ ಪರಿಪಾಲಕನನ್ನು (ಅಲ್ಲಾಹನನ್ನು) ನಿಷೇಧಿಸಿದವರು. ಅವರ ಕಂಠಗಳಲ್ಲಿ ಸಂಕೋಲೆಗಳಿವೆ. ಅವರೇ ನರಕವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.
Kannada Translation - Hamza Buturಅವರು ನಿಮ್ಮೊಡನೆ ಒಳಿತಿಗಿಂತ ಮೊದಲು ಕೆಡುಕನ್ನು (ಶಿಕ್ಷೆಯನ್ನು) ತರಲು ತ್ವರೆ ಮಾಡುತ್ತಾರೆ. ಮಾದರೀಯೋಗ್ಯ ಶಿಕ್ಷೆಗಳು ಅವರಿಗಿಂತ ಮೊದಲಿನ ತಲೆಮಾರುಗಳಿಗೆ ಈಗಾಗಲೇ ಸಂಭವಿಸಿಬಿಟ್ಟಿದೆ. ನಿಶ್ಚಯವಾಗಿಯೂ, ಜನರು ಅಕ್ರಮಿಗಳಾಗಿದ್ದೂ ಸಹ ನಿಮ್ಮ ಪರಿಪಾಲಕನು (ಅಲ್ಲಾಹು) ಅವರನ್ನು ಕ್ಷಮಿಸುವವನಾಗಿದ್ದಾನೆ. ನಿಶ್ಚಯವಾಗಿಯೂ, ನಿಮ್ಮ ಪರಿಪಾಲಕನು (ಅಲ್ಲಾಹು) ಅತಿಕಠೋರವಾಗಿ ಶಿಕ್ಷಿಸುವವನೂ ಆಗಿದ್ದಾನೆ.
Kannada Translation - Hamza Buturಸತ್ಯನಿಷೇಧಿಗಳು ಕೇಳುತ್ತಾರೆ: “ಇವನಿಗೆ ಇವನ ಪರಿಪಾಲಕನಿಂದ (ಅಲ್ಲಾಹನಿಂದ) ಒಂದು ದೃಷ್ಟಾಂತವೇಕೆ ಇಳಿಸಲಾಗಿಲ್ಲ?” ನೀವು ಮುನ್ನೆಚ್ಚರಿಕೆ ನೀಡುವವರು ಮಾತ್ರ. ಎಲ್ಲಾ ಜನರಿಗೂ ಒಬ್ಬ ಮಾರ್ಗದರ್ಶಕನಿದ್ದಾನೆ.
Kannada Translation - Hamza Buturತಾಯಿ ತನ್ನ ಉದರದಲ್ಲಿ ಏನು ಹೊತ್ತಿದ್ದಾಳೆಂದು ಅಲ್ಲಾಹನಿಗೆ ಚೆನ್ನಾಗಿ ತಿಳಿದಿದೆ. ಗರ್ಭಾಶಯಗಳು ತಗ್ಗುವುದನ್ನು ಮತ್ತು ಉಬ್ಬುವುದನ್ನು ಅವನು ತಿಳಿಯುತ್ತಾನೆ. ಎಲ್ಲವೂ ಅವನ ಬಳಿ ಒಂದು ನಿರ್ಣಯದಂತೆ ಇವೆ.
Kannada Translation - Hamza Buturನಿಮ್ಮಲ್ಲಿ ಮಾತನ್ನು ರಹಸ್ಯವಾಗಿ ಹೇಳುವವನು ಮತ್ತು ಅದನ್ನು ಬಹಿರಂಗವಾಗಿ ಹೇಳುವವನು, ರಾತ್ರಿಯಲ್ಲಿ ಅಡಗಿಕೊಳ್ಳುವವನು ಮತ್ತು ಹಗಲಲ್ಲಿ ನಡೆದಾಡುವವನು—ಎಲ್ಲರೂ ಅಲ್ಲಾಹನಿಗೆ ಸಂಬಂಧಿಸಿದಂತೆ ಸಮಾನರಾಗಿದ್ದಾರೆ.
Kannada Translation - Hamza Buturಮನುಷ್ಯನ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಅವನ ಪಹರೆಗಾರರಿದ್ದಾರೆ.[1] ಅಲ್ಲಾಹನ ಆಜ್ಞೆಯಂತೆ ಅವರು ಅವನನ್ನು ಕಾಯುತ್ತಾರೆ. ಜನರು ಸ್ವಯಂ ತಮ್ಮಲ್ಲಿ ಬದಲಾವಣೆ ತರುವ ತನಕ ಅಲ್ಲಾಹು ಅವರ ಸ್ಥಿತಿಯನ್ನು ಖಂಡಿತ ಬದಲಾಯಿಸುವುದಿಲ್ಲ. ಯಾವುದಾದರೂ ಜನರನ್ನು ಶಿಕ್ಷಿಸಬೇಕೆಂದು ಅಲ್ಲಾಹು ಬಯಸಿದರೆ ಅದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಅವನ ಹೊರತು ಅವರಿಗೆ ಬೇರೆ ರಕ್ಷಕರೂ ಇಲ್ಲ.
Kannada Translation - Hamza Buturಸಿಡಿಲು ಅವನನ್ನು ಸ್ತುತಿಸುತ್ತಾ ಅವನ ಪರಿಶುದ್ಧತೆಯನ್ನು ಕೊಂಡಾಡುತ್ತದೆ ಮತ್ತು ದೇವದೂತರುಗಳು ಕೂಡ ಅವನ ಭಯದಿಂದ (ಅವನನ್ನು ಸ್ತುತಿಸುತ್ತಾರೆ). ಅವನು ಸಿಡಿಲುಗಳನ್ನು ಕಳುಹಿಸಿ, ಅವನು ಇಚ್ಛಿಸುವವರಿಗೆ ಅದು ಬಡಿಯುವಂತೆ ಮಾಡುತ್ತಾನೆ. ಸತ್ಯನಿಷೇಧಿಗಳು ಅಲ್ಲಾಹನ ವಿಷಯದಲ್ಲಿ ತರ್ಕಿಸುತ್ತಾರೆ. ಆದರೆ ಅಲ್ಲಾಹು ಮಹಾ ಶಕ್ತಿಶಾಲಿಯಾಗಿದ್ದಾನೆ.
Kannada Translation - Hamza Buturಅವನನ್ನು ಕರೆದು ಪ್ರಾರ್ಥಿಸುವುದೇ ನಿಜವಾದ ಪ್ರಾರ್ಥನೆ. ಅವರು ಅವನನ್ನು ಬಿಟ್ಟು ಯಾರನ್ನೆಲ್ಲಾ ಕರೆದು ಪ್ರಾರ್ಥಿಸುತ್ತಾರೋ ಅವರು ಅವರ ಪ್ರಾರ್ಥನೆಗೆ ಸ್ವಲ್ಪವೂ ಉತ್ತರ ನೀಡುವುದಿಲ್ಲ. ಅವರ (ಪ್ರಾರ್ಥಿಸುವವರ) ಸ್ಥಿತಿಯು ತನ್ನ ಎರಡು ಕೈಗಳನ್ನು ದೂರದಿಂದ ನೀರಿನ ಕಡೆಗೆ ಚಾಚಿ ಅದು ತನ್ನ ಬಾಯಿಗೆ ತಲುಪಬೇಕೆಂದು ಅದರೊಡನೆ ಕೇಳುವವನಂತೆ. ಅದು ಅವನ ಬಾಯಿಗೆ ತಲುಪುವುದಿಲ್ಲ. ಸತ್ಯನಿಷೇಧಿಗಳ ಪ್ರಾರ್ಥನೆಯು ವ್ಯರ್ಥವಲ್ಲದೆ ಇನ್ನೇನೂ ಅಲ್ಲ.[1]
Kannada Translation - Hamza Buturಭೂಮ್ಯಾಕಾಶಗಳಲ್ಲಿರುವ ಎಲ್ಲರೂ ಸ್ವಯಂಪ್ರೇರಣೆಯಿಂದ ಅಥವಾ ಬಲವಂತವಾಗಿ ಅಲ್ಲಾಹನಿಗೆ ಸಾಷ್ಟಾಂಗ ಮಾಡುತ್ತಾರೆ. ಬೆಳಗ್ಗೆ ಮತ್ತು ಸಂಜೆ ಅವರ ನೆರಳುಗಳು ಕೂಡ (ಸಾಷ್ಟಾಂಗ ಮಾಡುತ್ತವೆ).
Kannada Translation - Hamza Buturಕೇಳಿರಿ: “ಭೂಮ್ಯಾಕಾಶಗಳ ಪರಿಪಾಲಕ ಯಾರು?” ಹೇಳಿರಿ: “ಅಲ್ಲಾಹು.” ಕೇಳಿರಿ: “ಆದರೂ ನೀವು ಅವನನ್ನು ಬಿಟ್ಟು ಸ್ವಯಂ ಉಪಕಾರ ಅಥವಾ ತೊಂದರೆ ಮಾಡಲು ಕೂಡ ಸಾಧ್ಯವಿಲ್ಲದವರನ್ನು ರಕ್ಷಕರಾಗಿ ಸ್ವೀಕರಿಸಿದ್ದೀರಾ?” ಕೇಳಿರಿ: “ಕಣ್ಣು ಕಾಣದವನು ಮತ್ತು ಕಣ್ಣು ಕಾಣುವವನು ಸಮಾನರಾಗಲು ಸಾಧ್ಯವೇ? ಅಂಧಕಾರಗಳು ಮತ್ತು ಬೆಳಕು ಸಮಾನವಾಗಲು ಸಾಧ್ಯವೇ? ಇವರು ಅಲ್ಲಾಹನೊಂದಿಗೆ ಸಹಭಾಗಿಗಳಾಗಿ ಮಾಡಿದ ಆ ದೇವರುಗಳು ಕೂಡ ಅಲ್ಲಾಹು ಸೃಷ್ಟಿಸುವಂತೆಯೇ ಸೃಷ್ಟಿಸಿ, ಇವರಿಗೆ (ಎರಡೂ ಕಡೆಯ) ಸೃಷ್ಟಿಗಳು ಪರಸ್ಪರ ಸಮಾನವಾಗಿ ಕಾಣುತ್ತಿದೆಯೇ?”[1] ಹೇಳಿರಿ: “ಅಲ್ಲಾಹನೇ ಎಲ್ಲಾ ಸೃಷ್ಟಿಗಳ ಸೃಷ್ಟಿಕರ್ತ. ಅವನು ಏಕೈಕನು ಮತ್ತು ಮಹಾ ಶಕ್ತಿಶಾಲಿಯಾಗಿದ್ದಾನೆ.”
Kannada Translation - Hamza Buturಅವನು ಆಕಾಶದಿಂದ ಮಳೆಯನ್ನು ಸುರಿಸಿದನು. ನಂತರ ಕಣಿವೆಗಳು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ತುಂಬಿ ಹರಿದವು. ಆಗ ನೀರಿನ ಮೇಲಕ್ಕೆದ್ದು ಬರುವ ನೊರೆಗಳನ್ನು ಪ್ರವಾಹವು ಹೊತ್ತು ಹರಿಯುತ್ತದೆ. ಅವರು ಆಭರಣಗಳನ್ನು ಅಥವಾ ಉಪಕರಣಗಳನ್ನು ತಯಾರಿಸಲು ಬೆಂಕಿಗೆ ಹಾಕಿ ಕಾಯಿಸುವ ಲೋಹಗಳಿಂದಲೂ ಇದರಂತಹ ನೊರೆಗಳು ಬರುತ್ತವೆ. ಈ ರೀತಿಯಲ್ಲಿ ಅಲ್ಲಾಹು ಸತ್ಯ ಮತ್ತು ಅಸತ್ಯಕ್ಕೆ ಉದಾಹರಣೆ ಕೊಡುತ್ತಾನೆ. ನೊರೆಗಳು ಆರಿ ಮಾಯವಾಗುತ್ತವೆ. ಮನುಷ್ಯರಿಗೆ ಉಪಕಾರವಾಗುವ ವಿಷಯಗಳು ಭೂಮಿಯಲ್ಲಿ ಸ್ಥಿರವಾಗಿ ನಿಲ್ಲುತ್ತವೆ. ಈ ರೀತಿ ಅಲ್ಲಾಹು ಉದಾರಹಣೆಗಳನ್ನು ತಿಳಿಸುತ್ತಾನೆ.[1]
Kannada Translation - Hamza Buturತಮ್ಮ ಪರಿಪಾಲಕನ (ಅಲ್ಲಾಹನ) ಕರೆಗೆ ಉತ್ತರ ನೀಡಿದವರಿಗೆ ಅತಿಶ್ರೇಷ್ಠ ಪ್ರತಿಫಲವಿದೆ. ಅವನ ಕರೆಗೆ ಉತ್ತರ ಕೊಡದವರು ಯಾರೋ—ಅವರ ವಶದಲ್ಲಿ ಭೂಮಿಯಲ್ಲಿರುವ ಎಲ್ಲವೂ ಮತ್ತು ಅದರೊಂದಿಗೆ ಅಷ್ಟೇ ಬೇರೆಯೂ ಇದ್ದರೂ ಅವರು (ತಮ್ಮ ರಕ್ಷಣೆಗಾಗಿ) ಅವೆಲ್ಲವನ್ನೂ ಪರಿಹಾರವಾಗಿ ನೀಡುತ್ತಿದ್ದರು! ಅವರಿಗೇ ಅತಿಕೆಟ್ಟ ವಿಚಾರಣೆಯಿರುವುದು. ಅವರ ವಾಸಸ್ಥಳವು ನರಕವಾಗಿದೆ. ಅದು ಬಹಳ ನಿಕೃಷ್ಟ ವಾಸ್ತವ್ಯವಾಗಿದೆ.
Kannada Translation - Hamza Buturನಿಮಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಅವತೀರ್ಣವಾದ ಸಂದೇಶವು ಸತ್ಯವೆಂದು ತಿಳಿದವನು ಕಣ್ಣು ಕಾಣದ ವ್ಯಕ್ತಿಯಂತೆಯೇ? ಬುದ್ಧಿವಂತರು ಮಾತ್ರ ಉಪದೇಶವನ್ನು ಸ್ವೀಕರಿಸುತ್ತಾರೆ.
Kannada Translation - Hamza Buturಅಲ್ಲಾಹು ಜೋಡಿಸಲು ಆಜ್ಞಾಪಿಸಿದ್ದನ್ನು ಜೋಡಿಸುವವರು, ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಭಯಪಡುವವರು ಮತ್ತು ಕೆಟ್ಟ ವಿಚಾರಣೆಯನ್ನು ಹೆದರುವವರು,
Kannada Translation - Hamza Buturತಮ್ಮ ಪರಿಪಾಲಕನ (ಅಲ್ಲಾಹನ) ಸಂಪ್ರೀತಿಗಾಗಿ ತಾಳ್ಮೆ ವಹಿಸುವವರು, ನಮಾಝ್ ಸಂಸ್ಥಾಪಿಸುವವರು, ನಾವು ನೀಡಿದ ಧನದಿಂದ ರಹಸ್ಯವಾಗಿ ಮತ್ತು ಬಹಿರಂಗವಾಗಿ ಖರ್ಚು ಮಾಡುವವರು ಮತ್ತು ಒಳಿತು ಮಾಡುವ ಮೂಲಕ ಕೆಡುಕನ್ನು ತಡೆಯುವವರು. ಪರಲೋಕ ಭವನವಿರುವುದು ಇಂತಹವರಿಗೇ ಆಗಿದೆ.
Kannada Translation - Hamza Butur(ಅಂದರೆ) ಶಾಶ್ವತ ವಾಸ್ತವ್ಯದ ಸ್ವರ್ಗೋದ್ಯಾನಗಳು! ಅವರು ಅದನ್ನು ಪ್ರವೇಶಿಸುವರು. ಅವರ ಪೂರ್ವಜರು, ಪತ್ನಿಯರು ಮತ್ತು ಮಕ್ಕಳಲ್ಲಿ ನೀತಿವಂತರಾಗಿರುವವರು ಕೂಡ (ಅದನ್ನು ಪ್ರವೇಶಿಸುವರು). ದೇವದೂತರುಗಳು ಎಲ್ಲಾ ದ್ವಾರಗಳಿಂದಲೂ ಅವರ ಬಳಿಗೆ ಬರುವರು.
Kannada Translation - Hamza Buturಅಲ್ಲಾಹನ ಕರಾರನ್ನು ಅದು ಸದೃಢವಾದ ಬಳಿಕವೂ ಮುರಿಯುವವರು, ಅಲ್ಲಾಹು ಜೋಡಿಸಲು ಆದೇಶಿಸಿದ್ದನ್ನು ಕಡಿಯುವವರು ಮತ್ತು ಭೂಮಿಯಲ್ಲಿ ಕಿಡಿಗೇಡಿತನ ಮಾಡುವವರು ಯಾರೋ—ಅವರಿಗೆ ಶಾಪವಿದೆ. ಅವರಿಗೆ ಕೆಟ್ಟ ಭವನವಿದೆ.
Kannada Translation - Hamza Buturಅಲ್ಲಾಹು ಅವನು ಇಚ್ಛಿಸುವವರಿಗೆ ಉಪಜೀವನವನ್ನು ವಿಶಾಲಗೊಳಿಸುತ್ತಾನೆ ಮತ್ತು (ಅವನು ಇಚ್ಛಿಸುವವರಿಗೆ) ಕುಗ್ಗಿಸುತ್ತಾನೆ. ಅವರು ಇಹಲೋಕ ಜೀವನವನ್ನು ಆನಂದಿಸುತ್ತಾರೆ. ಪರಲೋಕಕ್ಕೆ ಹೋಲಿಸಿದರೆ ಇಹಲೋಕ ಜೀವನವು ಒಂದು (ತಾತ್ಕಾಲಿಕ) ಆನಂದ ಮಾತ್ರವಾಗಿದೆ.
Kannada Translation - Hamza Buturಸತ್ಯನಿಷೇಧಿಗಳು ಕೇಳುತ್ತಾರೆ: “ಇವನಿಗೆ ಇವನ ಪರಿಪಾಲಕನಿಂದ (ಅಲ್ಲಾಹನಿಂದ) ಒಂದು ದೃಷ್ಟಾಂತವೇಕೆ ಇಳಿಸಲಾಗಿಲ್ಲ?” ಹೇಳಿರಿ: “ಅಲ್ಲಾಹು ಅವನು ಇಚ್ಛಿಸುವವರನ್ನು ದಾರಿತಪ್ಪಿಸುತ್ತಾನೆ ಮತ್ತು ಅವನ ಕಡೆಗೆ ತಿರುಗಿದವರಿಗೆ ಸನ್ಮಾರ್ಗವನ್ನು ತೋರಿಸುತ್ತಾನೆ.”
Kannada Translation - Hamza Buturಈ ರೀತಿಯಲ್ಲಿ ನಾವು ನಿಮ್ಮನ್ನು ಒಂದು ಸಮುದಾಯಕ್ಕೆ ಸಂದೇಶವಾಹಕರನ್ನಾಗಿ ಕಳುಹಿಸಿದ್ದೇವೆ—ಅದಕ್ಕಿಂತ ಮೊದಲು ಅನೇಕ ಸಮುದಾಯಗಳು ಕಳೆದು ಹೋಗಿವೆ—ನಾವು ನಿಮಗೆ ನೀಡಿದ ದೇವವಾಣಿಗಳನ್ನು ಅವರಿಗೆ ಓದಿಕೊಡುವುದಕ್ಕಾಗಿ. ಅವರು ಪರಮ ದಯಾಮಯನನ್ನು (ಅಲ್ಲಾಹನನ್ನು) ನಿಷೇಧಿಸುತ್ತಾರೆ. ಹೇಳಿರಿ: “ಅವನೇ ನನ್ನ ಪರಿಪಾಲಕನು. ಅವನ ಹೊರತು ಆರಾಧಿಸಲು ಅರ್ಹರಾದ ಬೇರೆ ದೇವರಿಲ್ಲ. ನಾನು ಅವನಲ್ಲಿ ಭರವಸೆಯಿಟ್ಟಿದ್ದೇನೆ. ನಾನು ಮರಳಿಹೋಗುವುದು ಅವನ ಬಳಿಗೇ ಆಗಿದೆ.”
Kannada Translation - Hamza Buturಯಾವುದೇ ಕುರ್‌ಆನಿನ (ದೈವಿಕ ಗ್ರಂಥದ) ಮೂಲಕ ಬೆಟ್ಟಗಳನ್ನು ಚಲಿಸುವಂತೆ, ಭೂಮಿ ನುಚ್ಚುನೂರಾಗುವಂತೆ, ಅಥವಾ ಸತ್ತವನು ಮಾತನಾಡುವಂತೆ ಮಾಡಲಾದರೂ (ಅವರು ಸತ್ಯವಿಶ್ವಾಸಿಗಳಾಗಲಾರರು). ವಾಸ್ತವವಾಗಿ, ಎಲ್ಲವೂ ಅಲ್ಲಾಹನ ನಿಯಂತ್ರಣದಲ್ಲಿವೆ. ಅಲ್ಲಾಹು ಇಚ್ಛಿಸುತ್ತಿದ್ದರೆ ಮನುಷ್ಯರೆಲ್ಲರನ್ನೂ ಅವನು ಸನ್ಮಾರ್ಗದಲ್ಲಿ ಸೇರಿಸುತ್ತಿದ್ದನೆಂದು ಸತ್ಯವಿಶ್ವಾಸಿಗಳಿಗೆ ತಿಳಿದಿಲ್ಲವೇ? ಸತ್ಯನಿಷೇಧಿಗಳಿಗೆ ಅವರು ಮಾಡಿದ ದುಷ್ಕರ್ಮಗಳ ನಿಮಿತ್ತ ಯಾವುದಾದರೂ ಅನಾಹುತಗಳು ಸಂಭವಿಸುತ್ತಲೇ ಇರುತ್ತವೆ. ಅಥವಾ ಅವರ ಮನೆಗಳ ಸಮೀಪವೇ ಅದು ಎರಗಬಹುದು. ಎಲ್ಲಿಯವರೆಗೆಂದರೆ, ಅಲ್ಲಾಹನ ವಾಗ್ದಾನವು ಬರುವ ತನಕ. ನಿಶ್ಚಯವಾಗಿಯೂ ಅಲ್ಲಾಹು ವಾಗ್ದಾನಗಳನ್ನು ಉಲ್ಲಂಘಿಸುವುದಿಲ್ಲ.
Kannada Translation - Hamza Buturನಿಮಗಿಂತ ಮೊದಲು ಕೂಡ ಸಂದೇಶವಾಹಕರುಗಳು ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ. ಆಗಲೂ ನಾನು ಸತ್ಯನಿಷೇಧಿಗಳಿಗೆ ಕಾಲಾವಕಾಶ ನೀಡಿದ್ದೆ. ನಂತರ ಅವರನ್ನು ಹಿಡಿದು ಬಿಟ್ಟೆ. ಆಗ ನನ್ನ ಶಿಕ್ಷೆ ಹೇಗಿತ್ತು?
Kannada Translation - Hamza Buturಪ್ರತಿಯೊಬ್ಬ ಮನುಷ್ಯನು ಮಾಡಿದ ಕರ್ಮಗಳ ಮೇಲ್ನೋಟ ವಹಿಸುವ ಅಲ್ಲಾಹು (ಏನೂ ತಿಳಿಯದವನೇ?) ಅವರು (ಇತರ ದೇವರುಗಳನ್ನು) ಅಲ್ಲಾಹನಿಗೆ ಸಹಭಾಗಿಗಳಾಗಿ ಮಾಡಿದರು. ಹೇಳಿರಿ: “ಅವರ ಹೆಸರನ್ನು ಹೇಳಿರಿ. ಭೂಮಿಯಲ್ಲಿ ಅಲ್ಲಾಹನಿಗೆ ತಿಳಿಯದಿರುವ ವಿಷಯವನ್ನು ನೀವು ಅವನಿಗೆ ತಿಳಿಸುತ್ತಿದ್ದೀರಾ? ಅಥವಾ ನೀವು ಕೇವಲ ಊಹಿಸಿ ಹಾಗೆ ಹೇಳುತ್ತಿದ್ದೀರಾ?”[1] ಅಲ್ಲ, ವಾಸ್ತವವಾಗಿ ಸತ್ಯನಿಷೇಧಿಗಳಿಗೆ ಅವರ ತಂತ್ರಗಳನ್ನು ಆಕರ್ಷಕವಾಗಿ ತೋರಿಸಲಾಗಿದೆ ಮತ್ತು ಅವರನ್ನು ಸತ್ಯಮಾರ್ಗದಿಂದ ತಡೆಯಲಾಗಿದೆ. ಅಲ್ಲಾಹು ಯಾರನ್ನು ದಾರಿತಪ್ಪಿಸುತ್ತಾನೋ ಅವನಿಗೆ ದಾರಿ ತೋರಿಸುವವರು ಯಾರೂ ಇಲ್ಲ.
Kannada Translation - Hamza Buturದೇವಭಯವುಳ್ಳವರಿಗೆ ವಾಗ್ದಾನ ಮಾಡಲಾದ ಸ್ವರ್ಗವು ಹೇಗಿದೆಯೆಂದರೆ, ಅದರ ತಳಭಾಗದಲ್ಲಿ ನದಿಗಳು ಹರಿಯುತ್ತಿವೆ. ಅದರ ಹಣ್ಣುಗಳು ಮತ್ತು ನೆರಳು ಶಾಶ್ವತವಾಗಿವೆ. ಅದು ದೇವಭಯವುಳ್ಳವರ ಅಂತಿಮ ಸ್ಥಿತಿಯಾಗಿದೆ! ಸತ್ಯನಿಷೇಧಿಗಳ ಅಂತಿಮ ಸ್ಥಿತಿಯು ನರಕಾಗ್ನಿಯಾಗಿದೆ.
Kannada Translation - Hamza Buturನಾವು (ಇದಕ್ಕೆ ಮೊದಲು) ಯಾರಿಗೆ ಗ್ರಂಥವನ್ನು ನೀಡಿದ್ದೇವೋ ಅವರು ನಿಮಗೆ ಅವತೀರ್ಣವಾದ ಈ ಗ್ರಂಥದ ಬಗ್ಗೆ ಸಂತಸಪಡುತ್ತಾರೆ. ಅದರ ಕೆಲವು ಭಾಗಗಳನ್ನು ನಿಷೇಧಿಸುವ ಪಂಗಡಗಳೂ ಅವರಲ್ಲಿವೆ. ಹೇಳಿರಿ: “ಅಲ್ಲಾಹನನ್ನು ಮಾತ್ರ ಆರಾಧಿಸಬೇಕು ಮತ್ತು ಅವನೊಂದಿಗೆ ಏನೂ ಸಹಭಾಗಿತ್ವ (ಶಿರ್ಕ್) ಮಾಡಬಾರದೆಂದು ನನಗೆ ಆಜ್ಞಾಪಿಸಲಾಗಿದೆ. ನಾನು ಅವನ ಕಡೆಗೇ ಕರೆಯುತ್ತಿದ್ದೇನೆ. ನಾನು ಮರಳಿಹೋಗುವುದು ಕೂಡ ಅವನ ಬಳಿಗೇ ಆಗಿದೆ.”
Kannada Translation - Hamza Buturಈ ರೀತಿ ನಾವು ಈ ಕುರ್‌ಆನನ್ನು ಅರಬ್ಬಿ ಭಾಷೆಯಲ್ಲಿರುವ ಆಜ್ಞೆಯಾಗಿ ಅವತೀರ್ಣಗೊಳಿಸಿದ್ದೇವೆ. ನಿಮಗೆ ಜ್ಞಾನ ಬಂದ ಬಳಿಕವೂ ನೀವು ಅವರ ಸ್ವೇಚ್ಛೆಗಳನ್ನು ಹಿಂಬಾಲಿಸಿದರೆ, ನಿಮ್ಮನ್ನು ಅಲ್ಲಾಹನ ಶಿಕ್ಷೆಯಿಂದ ಪಾರು ಮಾಡುವ ಯಾವುದೇ ಸಹಾಯಕರು ಅಥವಾ ರಕ್ಷಕರು ಇರಲಾರರು.
Kannada Translation - Hamza Buturನಿಮಗಿಂತ ಮೊದಲೂ ನಾವು ಸಂದೇಶವಾಹಕರುಗಳನ್ನು ಕಳುಹಿಸಿದ್ದೇವೆ. ಅವರಿಗೆ ನಾವು ಪತ್ನಿ-ಮಕ್ಕಳನ್ನು ನೀಡಿದ್ದೇವೆ. ಅಲ್ಲಾಹನ ಅಪ್ಪಣೆಯಿಲ್ಲದೆ ಯಾವುದೇ ಒಂದು ದೃಷ್ಟಾಂತವನ್ನು ತರಲು ಸಂದೇಶವಾಹಕರಲ್ಲಿ ಯಾರಿಗೂ ಸಾಧ್ಯವಿಲ್ಲ. ಎಲ್ಲಾ ನಿಶ್ಚಿತ ವಾಗ್ದಾನಗಳಿಗೂ ಒಂದು ಲಿಖಿತ ಸಮಯವಿದೆ.
Kannada Translation - Hamza Buturನಾವು ಅವರಿಗೆ ವಾಗ್ದಾನ ಮಾಡುವ ಶಿಕ್ಷೆಗಳಲ್ಲಿ ಕೆಲವನ್ನು ನಾವು ನಿಮಗೆ ತೋರಿಸಿಕೊಟ್ಟರೂ ಅಥವಾ (ಅದಕ್ಕಿಂತ ಮೊದಲೇ) ನಾವು ನಿಮ್ಮ ಆತ್ಮವನ್ನು ವಶಪಡಿಸಿದರೂ ನಿಮ್ಮ ಕರ್ತವ್ಯವು ಸಂದೇಶವನ್ನು ತಲುಪಿಸುವುದು ಮಾತ್ರ. ವಿಚಾರಣೆ ಮಾಡಬೇಕಾದುದು ನಮ್ಮ ಹೊಣೆಯಾಗಿದೆ.
Kannada Translation - Hamza Buturನಾವು ಭೂಮಿಯನ್ನು ಅದರ ಕಿನಾರೆಗಳಿಂದ ಕುಗ್ಗಿಸುವುದನ್ನು ಅವರು ನೋಡುವುದಿಲ್ಲವೇ?[1] ಅಲ್ಲಾಹು ತೀರ್ಪು ನೀಡುತ್ತಾನೆ. ಅವನ ತೀರ್ಪನ್ನು ಹಿಂದಿಕ್ಕಲು (ರದ್ದು ಮಾಡಲು) ಯಾರಿಗೂ ಸಾಧ್ಯವಿಲ್ಲ. ಅವನು ಶೀಘ್ರವಾಗಿ ವಿಚಾರಣೆ ಮಾಡುತ್ತಾನೆ.
Kannada Translation - Hamza Buturಇವರಿಗಿಂತ ಮೊದಲಿನವರು ಕೂಡ ಪಿತೂರಿ ಮಾಡಿದ್ದರು. ಆದರೆ ತಂತ್ರಗಾರಿಕೆಗಳೆಲ್ಲವೂ ಅಲ್ಲಾಹನಿಗೆ ಸೇರಿದ್ದು. ಪ್ರತಿಯೊಬ್ಬ ಮನುಷ್ಯನು ಮಾಡುವ ಕರ್ಮಗಳನ್ನು ಅವನು ತಿಳಿಯುತ್ತಾನೆ. ಅಂತಿಮ ಭವನವು ಯಾರಿಗೆ ದೊರೆಯಲಿದೆಯೆಂದು ಸತ್ಯನಿಷೇಧಿಗಳು ಸದ್ಯವೇ ತಿಳಿಯುವರು.
Kannada Translation - Hamza Buturಸತ್ಯನಿಷೇಧಿಗಳು ಹೇಳುತ್ತಾರೆ: “ನೀನು ಸಂದೇಶವಾಹಕನಲ್ಲ.” ಹೇಳಿರಿ: “ನನ್ನ ಮತ್ತು ನಿಮ್ಮ ನಡುವೆ ಸಾಕ್ಷಿ ನುಡಿಯಲು ಅಲ್ಲಾಹು ಸಾಕು. ಯಾರ ಬಳಿ ಗ್ರಂಥದ ಜ್ಞಾನವಿದೆಯೋ ಅವರೂ ಸಾಕು.”